ಬ್ರೇಲ್, ಲೂಯಿ
1809-52, ಕುರುಡರು ಓದಿ ಬರೆಯಲು ಅನುಕೂಲಿಸುವಂತೆ ಕೇವಲ ಆರು ಚುಕ್ಕೆಗಳ ಸಂಯೋಜನೆಯಿಂದ ಲಿಪಿಯನ್ನು ಸಿದ್ಧಪಡಿಸಿದವ. ಇಂದು ಪ್ರಪಂಚಾದ್ಯಂತ ಕುರುಡರಿಗೆ ಈ ಲಿಪಿಯೇ ವರ ಪ್ರಧಾನವಾಗಿದೆ. ಈತ 1809ರಲ್ಲಿ ಪ್ಯಾರಿಸ್‍ಬಳಿಯ ಕುಪ್‍ವ್ರೇ ಎಂಬ ಹಳ್ಳಿಯಲ್ಲಿ ಹುಟ್ಟಿದ. ತಂದೆ ಜೀನುಗಳ ತಯಾರಕ. ಮೂರು ವರ್ಷದ ಮಗುವಾಗಿದ್ದಾಗ ತಂದೆಯ ಕಾರ್ಖಾನೆಯಲ್ಲಿ ಚೂಪಾದ ಆಯುಧಗಳೊಡನೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಆಯುಧ ಈತನ ಕಣ್ಣಿನೊಳಕ್ಕೆ ಹೋಗಿ ಎಡಗಣ್ಣನ್ನು ಕಳೆದುಕೊಂಡ. ಎಂಟು ವರ್ಷಗಳ ತರುವಾಯ ಈತನ ಇನ್ನೊಂದು ಕಣ್ಣು ಕುರುಡಾಯಿತು. ಈತ ಹತ್ತು ವರ್ಷದ ಬಾಲಕನಾಗಿದ್ದಾಗ ಪ್ಯಾರಿಸಿನ ವ್ಯಾಲಿಂಟೀನ್ ಹೋವೆಯಲ್ಲಿ ಪ್ರಾರಂಭವಾದ ಕುರುಡರ ಶಾಲೆಗೆ ಸೇರಿದ. ಅಲ್ಲಿ ಓದುತ್ತಿದ್ದಾಗ ಫ್ರೆಂಚ್ ಸೈನ್ಯಾಧಿಕಾರಿ ಚಾಲ್ರ್ಸ್ ಬಾರ್ಜೀಸ್ ಎಂಬಾತ ಸೈನಿಕರು ರಾತ್ರಿವೇಳೆಯಲ್ಲಿ ಆಜ್ಞೆಗಳನ್ನು ಓದಲು ಅನುಕೂಲವಾಗುವಂತೆ ತಾನು ಕಂಡುಹಿಡಿದಿದ್ದ 12ಉಬ್ಬು ಚುಕ್ಕೆಗಳ ಲಿಪಿಯನ್ನು ಕುರುಡರಿಗೆ ಅನುಕೂಲವಾಗುವುದಾದರೆ ಉಪಯೋಗಿಸಬೇಕೆಂದು ಶಾಲೆಯ ವ್ಯವಸ್ಥಾಪಕರಿಗೆ ನೀಡಿದ. ಬ್ರೇಲ್ ಈ ಲಿಪಿಯನ್ನು ಅಭ್ಯಾಸ ಮಾಡಿ ಇದರ ಆಧಾರದ ಮೇಲೆ ಆರು ಚುಕ್ಕೆಗಳಿರುವ ಒಂದು ಲಿಪಿಯನ್ನು 1825ರಲ್ಲಿ ಕಂಡುಹಿಡಿದ. (ನೋಡಿ- ಬ್ರೇಲ್-ಲಿಪಿ) ಇದು ಮೂಲತಃ ಫ್ರೆಂಚ್ ಭಾಷೆಯಲ್ಲಿತ್ತು. ಅನಂತರ ಇದು ಅನೇಕ ಪರಿಷ್ಕಾರಗಳನ್ನು ಹೊಂದಿ ಈಗ ಪ್ರಪಂಚಾದ್ಯಂತ ಉಪಯೋಗಿಸಲ್ಪಡುತ್ತಿದೆ. ಈತ 1852ರಲ್ಲಿ ಕ್ಷಯರೋಗದಿಂದ ತೀರಿಕೊಂಡ. ಈತನ ಮರಣಾನಂತರ ಈ ಲಿಪಿಗೆ ಮಾನ್ಯತೆ ದೆ00ಅ6ರೆಯಿತು.
(ಎಸ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ